ಅಬ್ಸರ್ವರ್
	ಬ್ರಿಟನ್ನಿನಿಂದ ಪ್ರಕಟವಾದ ಮೊಟ್ಟ ಮೊದಲ ರವಿವಾರದ ಪತ್ರಿಕೆ. ರವಿವಾರದ ಪತ್ರಿಕೆಯಲ್ಲಿ ಅತ್ಯಂತ ಪ್ರಬಲ ರಾಜಕೀಯ ಪ್ರಕಟಣೆ ಎನಿಸಿದ ಇದು 1791ರಲ್ಲಿ ಆರಂಭವಾಯಿತು. ಮೊದಲಲ್ಲಿ ಶ್ರೀಮದ್ಗಾಂಭೀರ್ಯಕ್ಕೂ ಹಿತಮಿತದ ಹೆಸರಿನಲ್ಲಿ ಸಪ್ಪೆಯ ಬರವಣಿಗೆಗೂ ಆಶ್ರಯವಾಗಿತ್ತು. ಲಾರ್ಡ್ ಆಸ್ಟರ್ ಅವರು ವಹಿಸಿಕೊಂಡಮೇಲೆ (1942ರಿಂದ) ಈ ಪತ್ರಿಕೆಗೆ ವಿಶಿಷ್ಟ ವ್ಯಕ್ತಿತ್ವ ಲಭಿಸಿತು. ಅನಂತರ ರಾಜಕೀಯಕ್ಕೆ ಸಂಬಂಧಿಸಿದಂತೆ ನಿರ್ಭಯವಾದ ಸ್ವತಂತ್ರಮನೋವೃತ್ತಿಯ ಗಂಡುಶೈಲಿಯ ಬರೆವಣಿಗೆಗೆ ಹೆಸರು ಪಡೆದಿದೆ, ವಿದೇಶ ವ್ಯವಹಾರಗಳ ವರದಿ, ವಿಶ್ಲೇಷಣೆ, ಕಲೆ, ಶಿಕ್ಷಣ ಈ ಪತ್ರಿಕೆಯ ವೈಶಿಷ್ಟ್ಯ. 1976ರಲ್ಲಿ ಅಟ್ಲಾಂಟಿಕ್ ರಿಜ್‍ಫೀಲ್ಡ್ ಕಂಪನಿ ಎಂಬ ಅಮೆರಿಕನ್ ಸಂಸ್ಥೆ ಇದರ ಸ್ವಾಮ್ಯ ಪಡೆಯಿತು. ಆದರೆ ರೊಲಾಂಡ್ ರೌಲ್ಯಾಂಡ್ ಎಂಬ ಬ್ರಿಟಿಷ್ ಕೈಗಾರಿಕೋದ್ಯಮಿ 1981ರಲ್ಲಿ ಇದನ್ನು ಅಮೆರಿಕನರಿಂದ ಕೊಂಡು ಕೊಂಡರು.							
	
(ಕೆ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ